ಸರಿ???-ತಪ್ಪು???
ನಮಸ್ಕಾರ,
ಏಪ್ರಿಲ್ 14, ಮುಗಿಯಿತು ಲಾಕ್ ಡೌನ್ ಎನ್ನುವಷ್ಟರಲ್ಲಿ ಮೇ ೩ ರ ವರೆಗೆ ಮುಂದೂಡಿಕೆ. ಈ ಸಮಯದಲ್ಲಿ ನಾನೊಂದು blog create ಮಾಡಿ..,ಕನ್ನಡ ವಾಯ್ಸ್ ಟೈಪಿಂಗ್ ಮೂಲಕ ಇವತ್ತಿನ ವಿಚಾರ ಬರೆಯುವ ಹಾಗಾಗಿದ್ದು ನನ್ನ ಸಾಧನೆ 😀. 21ದಿನಗಳ ಲಾಕ್ ಡೌನ್ ನಲ್ಲಿ ಬಹಳ ಮಂದಿ ಬಹಳ ವಿಚಾರ ಕಲಿತಿದ್ದು ಹೆಮ್ಮೆಯ ವಿಷಯ. ಬಹಳ ಜನ ಅಡಿಗೆ ತಿಂಡಿ ವಿಚಾರದಲ್ಲಿ ತುಂಬಾ ಆಸಕ್ತಿ ತೋರಿಸಿದ್ದು ಕಂಡುಬಂತು. ಆದರೆ ಒಂದು ಜಿಜ್ಞಾಸೆ ಶುರುವಾಗಿದೆ ನನಗೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಖುಷಿ ಯಿಂದ ತಾವು ಮಾಡಿದ ಅಡಿಗೆ ವರ್ಕೌಟ್ ವಿಡಿಯೋ, ಹಾಡು, ಹಸೆ ಇತ್ಯಾದಿಗಳ ವಿವರಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿ ಕೆಲವರು ಈ ಸಂಕಟದ ಸಮಯದಲ್ಲಿ, ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳು, ಕಾನೂನು ಪಾಲಕರು ಎಲ್ಲರೂ ಸೈನಿಕರು ಯುದ್ಧವನ್ನು ಎದುರಿಸುವ ರೀತಿಯಲ್ಲಿ ಹೋರಾಡುತ್ತಿದ್ದಾರೆ, ಆದರೆ ಮನೆಯಲ್ಲಿ ಕುಳಿತಿರುವ ಜನರು ಈ ರೀತಿಯಾಗಿ ಯಾವುದೋ ಆಚರಣೆಯನ್ನು ಆಚರಿಸುತ್ತಿರುವಂತೆ ವರ್ತಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಬಂದಿಯಾಗಿ, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಜನರು, ಮಕ್ಕಳು ಏನು ಮಾಡಬೇಕು? ಹೇಗೆ ಸಮಯವನ್ನು ಕಳೆಯಬೇಕು? ಎಲ್ಲರೂ ಒಳಿತಿಗೋಸ್ಕರ ಭಗವಂತನಲ್ಲಿ ಪ್ರಾರ್ಥಿಸಬೇಕು ನಿಜ.
ಮನಸೆಂಬ ಮರ್ಕಟನನ್ನು ನಾವು ಹೇಳಿದಂತೆ ಕೇಳುವ ಹಾಗೆ ಮಾಡುವುದು ಸುಲಭವಲ್ಲ.ಎಲ್ಲರೂ ಆ ವಿದ್ಯೆ ಬಲ್ಲವರಲ್ಲ.ಪ್ರತಿಯೊಬ್ಬರಿಗೂ ತನ್ನನ್ನು ಎಲ್ಲರೂ ಗಮನಿಸಬೇಕು ಹೊಗಳಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ನಂತಹ ವೇದಿಕೆಯಲ್ಲಿ ತಾವು ಮಾಡಿದ್ದನ್ನು ಹಂಚಿಕೊಳ್ಳುವ ಆಸೆ. ಜೊತೆಗೆ ಇಂತಹ ಸಮಯದಲ್ಲಿ ಮಕ್ಕಳನ್ನು ಎಂಗೇಜ್ ಮಾಡುವ ಕೆಲಸ ಸುಲಭದ ಮಾತಲ್ಲ. ಪುಟ್ಟ ಪುಟ್ಟ ಮಕ್ಕಳನ್ನು ಕ್ರಿಯಾಶೀಲವಾಗಿ ಇರಿಸುವುದರ ಜೊತೆ ಮಕ್ಕಳು ಡೊಮಿನೊಸ್, ಕೆ ಎಫ್ ಸಿ, ಪಿಜ್ಜಾ ಹಟ್ ಗಳನ್ನು ಮಿಸ್ ಮಾಡಿಕೊಳ್ಳದೆ ಇರಲು ಅಮ್ಮಂದಿರು ಶ್ರಮ ಪಡಬೇಕಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅಮ್ಮಂದಿರ ತಿನಿಸುಗಳ ಪೋಸ್ಟಗಳನ್ನು ನೋಡಿದಾಗ ಈ ಡೋಮಿನೋಸ್ ಪಿಜ್ಜಾ ಹಟ್, ಸಬ್ ವೇ ಗಳಂತಹ ಔಟ್ ಲೆಟ್ ಗಳು ಅಗತ್ಯವಿಲ್ಲ ಅನಿಸಿ ಖುಷಿಯಾಗಿದ್ದು ನಿಜ.
ಆದರೂ ನಾವೆಲ್ಲ ಒಂದು ರೀತಿಯ ಭಯದಲ್ಲೇ ದಿನ ಕಳೆಯುತ್ತಿದ್ದೇವೆ. ರಾತ್ರಿ ಟಿವಿ ನ್ಯೂಸ್ ನಲ್ಲಿ ಬರುವ ಕ್ರಿಕೆಟ್ ಸ್ಕೋರ್ ಗಳಂತೆ ಕಾಣುವ ಸೋಂಕು,ಮೃತರ ಸಂಖ್ಯೆಗಳನ್ನು ನೋಡಿ ಮಲಗುವಾಗ ನಾಳೆಯ ಭರವಸೆ ಇರುವುದಿಲ್ಲ.
ಈ ಎಲ್ಲಾ ದ್ವಂದ್ವ, ಭಯ, ಅನಿಶ್ಚಿತತೆ ಗಳನ್ನು ನಿರ್ವಹಿಸಿ ಹೊಸ ಸವಾಲುಗಳನ್ನು ಎದುರಿಸಲು ನಮಗೆ ಶಕ್ತಿ ಕೊಡುವುದೇ ಪ್ರಾಥ೯ನೆ.
ಅನನ್ಯಾಶ್ಚಿಂತಯಂತೋ ಮಾಂ ಮೇ ಜನಾಃ ಪಯು೯ಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಮ್ ವಹಾಮ್ಯಹಮ್
Leaving all other thoughts, those who worship me, will always be protected by me.
ಸ್ವತಃ ಭಗವಾನ್ ಮಹಾ ವಿಷ್ಣು ಹೇಳಿರುವಂತೆ, "ಎಲ್ಲಾ ಸರಿ ತಪ್ಪು, ದ್ವಂದ್ವ, ಭಯ, ಅನಿಶ್ಚಿತತೆ ಗಳನ್ನು ಬದಿಗೊತ್ತಿ, ನನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ,ನಾನು ರಕ್ಷಿಸುತ್ತೇನೆ".
ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಲಲಿತಾ ಸಹಸ್ರನಾಮ, ಶ್ರೀ ಗುರು ಚರಿತ್ರೆ, ಶ್ರೀ ಸಾಯಿ ಸಚ್ಚರಿತೆ ಇತ್ಯಾದಿ ಇತ್ಯಾದಿ... ಹೀಗೆ ಪರಿ ಪರಿ ಯಾಗಿ ಪ್ರಾಥಿ೯ಸಿದರೂ ಆ ವೈರಸ್ ರಾಕ್ಷಸನ ಸಂಹಾರದ ಸಮಯ ಬಂದಂತಿಲ್ಲ. ಅಥವಾ...... ಕೌನ್ ಕೆಹತಾ ಹೆ ಭಗವಾನ್ ಆತೇ ನಹಿ.... ಕೋಯಿ ಮೀರಾ ಕಿ ಜೈಸೆ ಬುಲಾತೆ ನಹಿ...
ಆ ಭಗವಂತ ನಮ್ಮ ಪ್ರಾಥ೯ನೆಗೆ ಭಕ್ತಿ ತುಂಬಿ, ನಮ್ಮ ಫ್ರಂಟ್ ಲೈನ್ ವಾರಿಯರ್ಸಗಳಲ್ಲಿ ಶಕ್ತಿ ತುಂಬಲಿ.
"ವೈದ್ಯೋ ನಾರಾಯಣೋ ಹರಿಃ"
ಶಶಿ ಭಾಸ್ಕರ
Comments
Post a Comment